Founder profile

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟರು

A life of learning, service and humility

A revered Vedic scholar and priest of the coastal tradition.

ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹೋಬಳಿಯ ಹವ್ಯಕ ಪುರೋಹಿತ ಕುಟುಂಬಗಳಲ್ಲೊಂದಾದ 'ಆಲಂಗಾರು' ಮನೆಯಲ್ಲಿ, ಪುತ್ತೂರು ಸೀಮೆಯ ಹಿರಿಯ ಹವ್ಯಕ ಸದ್ಗೃಹಸ್ಥರು ಮಿತ್ತೂರು ಎಂಬಲ್ಲಿ ನೆಲೆಗೊಳಿಸಿ ತಮ್ಮ ಕುಲಪುರೋಹಿತರಾಗಿ ಸ್ವೀಕರಿಸಿಕೊಂಡರು. ಆ ಮಿತ್ತೂರು ಮನೆಯ ವೈದಿಕರು ತಮ್ಮ ಶಿಷ್ಯವರ್ಗದ ಮನೆಗಳಲ್ಲಿ ನಡೆಯಬೇಕಾದ ಕರ್ಮಾಂಗಾನುಷ್ಠಾನಗಳನ್ನು ಯಥಾಯೋಗ್ಯವಾಗಿ ನಡೆಸಿಕೊಂಡು ಬರುತ್ತಿದ್ದರು.

ಈ ಮನೆಯಲ್ಲಿ ದಿ. ಮಿತ್ತೂರು ಕೃಷ್ಣ ಭಟ್ಟರು ಪ್ರಸಿದ್ಧ ಪುರೋಹಿತರಾಗಿಯೂ ಶಿಷ್ಯವತ್ಸಲರಾಗಿಯೂ ಕೀರ್ತಿ ಪಡೆದರು. ಅವರ ಕಿರಿಯ ಸಹೋದರರಾಗಿದ್ದ ದಿ. ಮಿತ್ತೂರು ನಾರಾಯಣ ಶಾಸ್ತ್ರಿಗಳು ಸಂಸ್ಕೃತಭಾಷೆ, ವ್ಯಾಕರಣಶಾಸ್ತ್ರ, ಜ್ಯೋತಿಃಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಪಂಡಿತರೂ ಬಹುಭಾಷಾವಿದರೂ ಆಗಿದ್ದು ಆ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಗುರುಗಳೂ ಆಗಿದ್ದರು.

ಈ ಸಹೋದರರಲ್ಲಿ ಹಿರಿಯರಾದ ಪುರೋಹಿತ ಕೃಷ್ಣ ಭಟ್ಟ ಮತ್ತು ಸರಸ್ವತಿ ಅಮ್ಮನವರಿಗೆ ತಿಮ್ಮಯ್ಯ ಭಟ್ಟ, ಶಂಕರನಾರಾಯಣ ಭಟ್ಟ ಎಂಬ ಇಬ್ಬರು ಗಂಡುಮಕ್ಕಳು. ಸಾವಿತ್ರಿ, ಕಾವೇರಿ, ಲಕ್ಷ್ಮೀ ಎಂಬ ಮಗಳಂದಿರು. ಗಂಡುಮಕ್ಕಳಲ್ಲಿ ಹಿರಿಯರಾದ ತಿಮ್ಮಯ್ಯ ಭಟ್ಟರು (1904–1986) ವೈದಿಕ ಕರ್ಮಾಂಗನಿಷ್ಣಾತರಾದ ಪುರೋಹಿತರಾದರೆ ತಮ್ಮ ಭಟ್ಟರೆಂದೇ ಪ್ರಸಿದ್ಧಿ ಪಡೆದ ಶಂಕರನಾರಾಯಣ ಭಟ್ಟರು (1918–1995) ವೈದಿಕ, ಧಾರ್ಮಿಕಕ್ಷೇತ್ರದಲ್ಲಿ ಅನೇಕ ಶಿಷ್ಯರಿಗೆ ಮಾರ್ಗದರ್ಶನ ಮಾಡಿದ್ದಲ್ಲದೆ, 'ಕನ್ನಡ ಸಂಧ್ಯಾಭಾಷ್ಯ' ಮೊದಲಾದ ಅನೇಕ ಗ್ರಂಥಗಳನ್ನು ರಚಿಸಿ ಸರಸ್ವತೀಸೇವೆ ಮಾಡಿದವರು. ತಿಮ್ಮಯ್ಯ ಭಟ್ಟರು ಕರ್ಮಕಾಂಡದ ಪರಿಣತರು, ಶಂಕರನಾರಾಯಣ ಭಟ್ಟರು ಜ್ಞಾನಕಾಂಡದ ಪರಿಣತರು. ಇಬ್ಬರು ಸೇರಿ ಒಂದು ಸುವರ್ಣ ನಾಣ್ಯದ ಎರಡು ಮುಖಗಳು.

ದಿ. ತಿಮ್ಮಯ್ಯ ಭಟ್ಟರು ಬಾಲ್ಯದಲ್ಲಿ ತಮ್ಮ ತೀರ್ಥರೂಪರಾದ ಕೃಷ್ಣ ಭಟ್ಟರಿಂದ ವೈದಿಕ ವಿದ್ಯಾಭ್ಯಾಸ ಪಡೆದು ಅನಂತರ ತಮ್ಮ ಪಿತೃವ್ಯಚರಣರಾದ ಮಿತ್ತೂರು ನಾರಾಯಣ ಶಾಸ್ತ್ರಿಗಳಿಂದ ಸಂಸ್ಕೃತಭಾಷಾ ಶಿಕ್ಷಣವನ್ನೂ ಪಡೆದರು. ಅಮೇಲೆ ತಮಿಳುನಾಡಿನ ದಿ. ಬ್ರಹ್ಮಶ್ರೀ ಪಾಲ್ಘಾಟ್ ನಾರಾಯಣ ಜಟಾವಲ್ಲಭ (ಅವಧಾನಿಗಳು) ಎಂಬ ವಿದ್ವಾಂಸರಲ್ಲಿ ವೇದಾಧ್ಯಯನ ಮಾಡಿ ಇಪ್ಪತ್ತರ ಎಳೆವಯಸ್ಸಿನಲ್ಲಿಯೇ ಪೂರ್ವಾಪರಪ್ರಯೋಗಗಳನ್ನು ಸ್ವತಂತ್ರವಾಗಿ ನಿರ್ವಹಿಸಬಲ್ಲ ಸಮರ್ಥ ಪುರೋಹಿತರಾದರು.

ಕರ್ಮಾಂಗಗಳ ಮರ್ಮವರಿತು, ಶಿಷ್ಯವರ್ಗದವರಲ್ಲಿ ಪ್ರೀತಿಯuಳ್ಳವರಾಗಿ, ಎಲ್ಲರಿಗೂ ವೈದಿಕ ಕ್ರಿಯಾಭಾಗಗಳಲ್ಲಿ ಗೌರವ ಮೂಡುವ ರೀತಿಯಲ್ಲಿ ವೈದಿಕ ಕಾರ್ಯಕ್ರಮಗಳನ್ನು ನಡೆಸುವ ಪುರೋಹಿತಶ್ರೇಷ್ಠರೆಂದು ಹೆಸರು ಪಡೆದರು. ಸುತ್ತಮುತ್ತಲಿನ ಸಮಸ್ತ ಆಸ್ತಿಕವೃಂದ ಅವರನ್ನು ಹಿರಿಯ ವೈದಿಕವಿದ್ವಾಂಸರೆಂದು ಗುರುತಿಸಿ ಗೌರವಿಸುವಂತಾಯಿತು. ವರ್ಚಸ್ವಿಯಾದ ವ್ಯಕ್ತಿತ್ವ, ಉತ್ತಮ ಪಾಂಡಿತ್ಯ, ಅಸ್ಖಲಿತ ಮಂತ್ರೋಚ್ಚಾರಣೆಗಳಿಂದ ಪ್ರಭಾವಿತರಾಗಿದ್ದ ಸಮಾಜಬಾಂಧವರು ಅವರ ವ್ಯಕ್ತಿತ್ವಕ್ಕೆ ಮಾರುಹೋಗುವಂತಾಯಿತು.

ಹಿರಿಯ ವಿದ್ವಾಂಸರು, ಪುರೋಹಿತರು ಎಂಬುದಾಗಿ ಸಮಾಜದಿಂದ ಗುರುತಿಸಲ್ಪಟ್ಟರೂ ತಿಮ್ಮಯ್ಯ ಭಟ್ಟರು ಅವರ ವ್ಯಕ್ತಿತ್ವಕ್ಕೆ ಸಹಜವಾದ ವಿನಯಶೀಲತೆ, ಪ್ರೀತಿ, ವಿಶ್ವಾಸಾರ್ಹತೆ, ಶಿಷ್ಯವಾತ್ಸಲ್ಯ, ಅಕುಟಿಲತೆ, ಸಂತೃಪ್ತಿ ಮೊದಲಾದ ಗುಣಗಳಲ್ಲಿ ಯಾವ ಕುಂದೂ ಇಲ್ಲದಂತೆ ಆದರ್ಶಜೀವನ ನಡೆಸಿದರು. ಅಹಂಕಾರ-ದುರಭಿಮಾನಗಳಂತಹ ವಿಷಯಗಳು ಇಡಿಯ ಜೀವಮಾನದಲ್ಲಿ ಅವರ ಬದುಕಿನಲ್ಲಿ ಸುಳಿಯಲಿಲ್ಲವೆಂಬುದನ್ನು ಅವರ ಶಿಷ್ಯವರ್ಗ ಇಂದೂ ನೆನಪಿಸಿಕೊಳ್ಳುತ್ತದೆ.

ಬೋಧಾಯನೀಯ ಪರಂಪರೆಯವರಾದರೂ ಆಪಸ್ತಂಭ ಸೂತ್ರದವರಿಗೂ ಪುರೋಹಿತರಾಗಿ ವೈದಿಕಕರ್ಮಗಳನ್ನು ತಿಮ್ಮಯ್ಯ ಭಟ್ಟರು ನಡೆಸಿದ್ದರು. ಗೃಹ್ಯಸೂತ್ರ, ಧರ್ಮಸೂತ್ರಗಳನ್ನು ಅಧ್ಯಯನ ಮಾಡಿ ಯಾವುದೇ ವಿಷಯವನ್ನು ನಿಸ್ಸಂದಿಗ್ಧವಾಗಿ ನಿರೂಪಿಸುವ ದೃಢತೆಯನ್ನು ಅವರು ಪಡೆದಿದ್ದರು.

ಕಿರಿಯ ತಲೆಮಾರಿನವರ ಬಗೆಗೆ ಅವರಿಗೆ ವಿಶೇಷ ಪ್ರೀತಿ-ವಿಶ್ವಾಸಗಳಿದ್ದುವು. ಹಿರಿಯರಲ್ಲಿ ಹಿರಿಯರಾಗಿ ಕಿರಿಯರೊಡನೆ ನಿಷ್ಕಲ್ಮಷಹೃದಯದ ಎಳೆಯರಾಗಿ ಅವರು ಬೆರೆಯುತ್ತಿದ್ದುದು ವಿಶಿಷ್ಟವಾಗಿತ್ತು.

ತಮ್ಮ ಧರ್ಮಪತ್ನಿ ದೇವಕಿ ಅಮ್ಮ, ಮಕ್ಕಳು ಮತ್ತು ಮೊಮ್ಮಕ್ಕಳ ಸಾಕಷ್ಟು ವಿಸ್ತಾರವಾದ ಸಂಸಾರದ ಹೊಣೆಯನ್ನು ಸ್ವಕೀಯ ಕಷ್ಟಕಾರ್ಪಣ್ಯಗಳ ಗೊಡವೆಯಿಲ್ಲದೆ ನಿರ್ವಹಿಸಿ 'ಅತಿಥಿದೇವೋ ಭವ' ಎಂಬ ವಾಕ್ಯಕ್ಕೆ ಉತ್ತಮ ಉದಾಹರಣೆಯಾಗಿ ತಮ್ಮ ಜೀವನವನ್ನು ರೂಪಿಸಿಕೊಂಡು ಹೃದಯಶ್ರೀಮಂತಿಕೆಯಿಂದಲೇ ಪರಿಸರವನ್ನು ಗೆದ್ದುಕೊಂಡು ಸಾರ್ಥಕಜೀವನವನ್ನು ನಡೆಸಿದವರು ತಿಮ್ಮಯ್ಯ ಭಟ್ಟರು.

'ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಮ್' ಎಂಬುದು ಅವರ ನಿತ್ಯದ ಪ್ರಾರ್ಥನೆಗಳಲ್ಲೊಂದು. ಆದರ್ಶಜೀವನ ನಡೆಸಿ ಎಂಬತ್ತೆರಡರ ಪರಿಪಕ್ವ ವಯಸ್ಸಿನಲ್ಲಿ ಆ ಪ್ರಾರ್ಥನೆಯ ರೀತಿಯಲ್ಲಿಯೇ ದೇಹಾಂತವನ್ನು ಹೊಂದಿದರು.

ಇಂತಹ ವಿದ್ವನ್ಮಾನ್ಯರ ನೆನಪಿನಲ್ಲಿ ಅವರ ಜೀವನದ ಧೈಯಗಳಿಗೆ ನಿಕಟವಾಗಿ ಸಂಬಂಧಿಸಿದ ವಿದ್ಯಾಪ್ರಸಾರ, ವೇದಾಭ್ಯಾಸಾದಿಗಳಿಗೆ ಪ್ರೋತ್ಸಾಹ, ಶಾಸ್ತ್ರಾಧ್ಯಯನ-ಸಂಸ್ಕೃತಾಧ್ಯಯನಗಳಿಗೆ ಉತ್ತೇಜನ, ತತ್ಸಂಬಂಧೀ ಗ್ರಂಥಪ್ರಕಾಶನ ಮೊದಲಾದ ಉದ್ದೇಶಗಳನ್ನಿರಿಸಿಕೊಂಡು ಸಾಂಸ್ಕೃತಿಕ ಸಮುನ್ನತಿಯನ್ನೇ ಸಾಧಿಸುವ ಉದ್ದೇಶದಿಂದ 1993ರಲ್ಲಿ 'ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ'ವು ಸ್ಥಾಪಿತವಾಯಿತು. ಅಂದಿನಿಂದ ಇದುವರೆಗೂ ಈ ಉದ್ದೇಶಗಳ ಸಾಧನೆಗಾಗಿ ಸಂಸ್ಥೆಯು ದುಡಿಯುತ್ತಿದೆ.

ದಿ. ತಿಮ್ಮಯ್ಯ ಭಟ್ಟರ ಜೀವನಚಿತ್ರಣವನ್ನು ಡಾ. ಪಾದೇಕಲ್ಲು ವಿಷ್ಣುಭಟ್ಟರು 'ಪುರೋಹಿತ ಪ್ರವರ ಮಿತ್ತೂರು ತಿಮ್ಮಯ್ಯ ಭಟ್ಟರು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಬರೆದಿದ್ದು ಸಂಪ್ರತಿಷ್ಠಾನವು ಅದನ್ನು 2019ರಲ್ಲಿ ಪ್ರಕಟಿಸಿರುತ್ತದೆ.