Scholar, teacher and author

ವೈದಿಕಶ್ರೇಷ್ಠ ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟರು

ದಿ। ಮಿತ್ತೂರು ಪುರೋಹಿತ ಕೃಷ್ಣ ಭಟ್ಟ ಹಾಗೂ ಸರಸ್ವತಿ ಅಮ್ಮನವರ ದ್ವಿತೀಯಪುತ್ರರಾಗಿ ಶ್ರೀ ಪುರೋಹಿತ ಶಂಕರನಾರಾಯಣ ಭಟ್ಟರು ತಾ. 28-2-1918ರಲ್ಲಿ ಜನಿಸಿದರು.

ಬಾಲ್ಯದ ಪ್ರಾಥಮಿಕ ವಿದ್ಯಾಭ್ಯಾಸದ ಅನಂತರ ತಮ್ಮ ತೀರ್ಥರೂಪರಾದ ಪುರೋಹಿತ ಕೃಷ್ಣ ಭಟ್ಟರಿಂದಲೂ ಪಿತೃವ್ಯಚರಣರಾದ ಸಂಸ್ಕೃತ, ಜ್ಯೋತಿಷಗಳೆರಡರಲ್ಲೂ ಪಾಂಡಿತ್ಯ ಹೊಂದಿದ್ದ ಮಿತ್ತೂರು ನಾರಾಯಣ ಶಾಸ್ತ್ರಿಗಳಿಂದಲೂ ಶಿಕ್ಷಣ ಪಡೆದ ಶಂಕರನಾರಾಯಣ ಭಟ್ಟರು ಸಂಸ್ಕೃತಾಧ್ಯಯನಕ್ಕಾಗಿ ಪೆರಡಾಲ ಮಹಾಜನ ಸಂಸ್ಕೃತ ಕಾಲೇಜು, ನೀರ್ಚಾಲು ಇಲ್ಲಿಗೆ ಸೇರ್ಪಡೆಗೊಂಡರು. ಅಲ್ಲಿ ಉದ್ದಾಮ ಪಂಡಿತರಾದ ದರ್ಭೆ ನಾರಾಯಣ ಶಾಸ್ತ್ರಿಗಳ ಶಿಷ್ಯರಾಗಿ ವಿದ್ಯಾರ್ಥಿದೆಸೆಯಲ್ಲಿಯೇ ಬಹುಮುಖ ಪ್ರತಿಭೆಯನ್ನು ಪ್ರಕಟಪಡಿಸಿದರು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಸ್ಕೃತ ನಾಟಕಗಳಲ್ಲಿಯೂ ಅಭಿನಯಿಸಿ ಬಹುಜನರ ಮೆಚ್ಚುಗೆಗೆ ಪಾತ್ರರಾದರು. ನೀರ್ಚಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು ಶಕುಂತಲೆಯಾಗಿಯೂ ಶ್ರೀಯುತ ಶಂಕರನಾರಾಯಣ ಭಟ್ಟರು ದುಷ್ಯಂತನಾಗಿಯೂ ಅಭಿನಯಿಸಿದ ಸಂಸ್ಕೃತದ ಶಾಕುಂತಲನಾಟಕವು ಆ ಕಾಲದಲ್ಲಿ ಬಹುಜನರ ಪ್ರಶಂಸೆಯನ್ನು ಗಳಿಸಿತ್ತು. ಆ ನಾಟಕವನ್ನು ವೀಕ್ಷಿಸಿದವರಿಗೆ ಇಂದಿಗೂ ಶ್ರೀ ಶಂಕರನಾರಾಯಣ ಭಟ್ಟರ ವಿಚಾರ ಬಂದಾಗ ಅವರ ಅಭಿನಯದ ' ಶಾಕುಂತಲನಾಟಕ ಥಟ್ಟನೆ ಸ್ಮೃತಿಪಟಲದಲ್ಲಿ ಬಂದು ಹೋಗುವುದಂತೆ. ಅಷ್ಟರ ಮಟ್ಟಿಗೆ ಶ್ರೀಯುತ ಶಂಕರನಾರಾಯಣ ಭಟ್ಟರೂ ವಿದ್ವಾನ್ ಪೆರ್ಲ ಕೃಷ್ಣ ಭಟ್ಟರೂ ಆ ನಾಟಕದಲ್ಲಿ ಮನೋಜ್ಞ ಅಭಿನಯವನ್ನು * ನೀಡಿದ್ದರಂತೆ.

ನೀರ್ಚಾಲಿನಲ್ಲಿ ಸಂಸ್ಕೃತ ಸಾಹಿತ್ಯ ಶಿರೋಮಣಿವರೆಗಿನ ಶಿಕ್ಷಣವನ್ನು ಮುಗಿಸಿದ ಬಳಿಕ ಶ್ರೀಯುತರು ಕರ್ಮಕಾಂಡ ಪ್ರಯೋಗಗಳನ್ನು ಅಭ್ಯಸಿಸಿ ಋತ್ವಿಜರಾಗಿ, ಪುರೋಹಿತರಾಗಿ ವೈದಿಕಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ವೈದಿಕ ಹಾಗೂ ಧರ್ಮಶಾಸ್ತ್ರಗಳ ವಿಚಾರಗಳಲ್ಲಿ ಅನೇಕ ಪ್ರಬುದ್ಧ ಉಪನ್ಯಾಸಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನೀಡಿದರು. ಸಮಾಜದಲ್ಲಿ ಬಹಳಷ್ಟು ಆತ್ಮೀಯರನ್ನೂ ಅಭಿಮಾನಿಗಳನ್ನೂ ಶಿಷ್ಯರನ್ನೂ ಗಳಿಸಿದರು. ತಮ್ಮ ಸಂಸ್ಕೃತಭಾಷಾಪ್ರಾವೀಣ್ಯದಿಂದ ಅನೇಕ ಪ್ರಯೋಗಗ್ರಂಥಗಳ ಅಧ್ಯಯನ ಮಾಡಿದರು. ಮನುಸ್ಮೃತಿ- ಧರ್ಮಸಿಂಧು-ಶಾರದಾತಿಲಕ-ಗೃಹ್ಯಸೂತ್ರ ಮೊದಲಾದ ಧರ್ಮಗ್ರಂಥಗಳ ಹಾಗೂ ರಾಮಾಯಣ, ಮಹಾಭಾರತ, ದೇವೀಭಾಗವತ, ಶ್ರೀಮದ್ಭಾಗವತವೇ ಮೊದಲಾದ ಪುರಾಣಗ್ರಂಥಗಳ ಸಮಗ್ರ ಪರಿಚಯವನ್ನು ಮಾಡಿಕೊಂಡರು. ತಮ್ಮ ಪಾಂಡಿತ್ಯದಿಂದ ವೈದಿಕರಿಗೆ ಅನುಕೂಲವಾಗುವಂತಹ ಅನೇಕ ಟಿಪ್ಪಣಿಗಳನ್ನು ಅನೇಕಾನೇಕ ವೈದಿಕಕ್ರಿಯಾಭಾಗಗಳ ವಿಧಿವಿಧಾನಗಳನ್ನು ಬಹಳ ಸರಳ ಹಾಗೂ ಸುಲಭಸಾಧ್ಯವಾಗುವಂತೆ ತಮ್ಮ ಸುಂದರವಾದ ಕೈಬರಹದಿಂದ ಬರೆದು ತೆರೆದ ಕೈಗನ್ನಡಿಯಂತೆ ಒದಗಿಸಿಕೊಟ್ಟರು. ವೈದಿಕರು ಯಾವುದೇ ವೇದೋಕ್ತವಾದ ಕ್ರಿಯಾಭಾಗದ ವಿಮರ್ಶಾತ್ಮಕ ವಿಚಾರಗಳ ಪರಾಮರ್ಶನೆಗಾಗಿ ಅವರನ್ನೇ ಆಶ್ರಯಿಸುತ್ತಿದ್ದರು. ಸಮಸ್ಯೆಗಳಿಗೆ ಶಾಸ್ತ್ರಗ್ರಂಥಗಳು ಆದೇಶಿಸಿದ ಚೌಕಟ್ಟಿನೊಳಗೆ ಪರಿಹಾರ ಸೂಚಿಸುವಲ್ಲಿ ತಮ್ಮ ಭಟ್ಟರು ಹೇಳಿದ ಮೇಲೆ ಎರಡನೆಯ ಮಾತೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರಿಗೆ ಮಾನ್ಯತೆ ಒದಗಿತ್ತು. ಈ ಮಾನ್ಯತೆಗೆ ಅವರ ಅಧ್ಯಯನ ಮತ್ತು ಚಿಂತನಗಳೇ ಕಾರಣವಾಗಿದ್ದುದು ಸ್ಪಷ್ಟ. ತಮ್ಮ ಅಧ್ಯಯನ ಮತ್ತು ಚಿಂತನಗಳ ಫಲವನ್ನು ಕಿರಿಯ ತಲೆಮಾರಿನವರಿಗೆ ನೀಡಿ ಜ್ಞಾನವನ್ನು ವರ್ಧಿಸುವಲ್ಲಿ ಅವರು ಬಹಳ ಆಸಕ್ತರಾಗಿದ್ದರು.

ತಕ್ಕಮಟ್ಟಿನ ಸಂಗೀತಜ್ಞಾನವನ್ನೂ ಹೊಂದಿದ್ದ ಶ್ರೀಯುತರು ಹಲವಾರು ಸಂಸ್ಕೃತಶ್ಲೋಕಗಳನ್ನೂ ಗೀತೆಗಳನ್ನೂ ಕೀರ್ತನೆಗಳನ್ನೂ ಅಲ್ಲದೆ ಹಾಡುಗಳನ್ನೂ ರಚಿಸಿ ಸುಮಧುರವಾಗಿ ಹಾಡುವವರಾಗಿದ್ದರು. ಅಖಂಡವಾಗಿಯೂ, ಸುಶ್ರಾವ್ಯವಾಗಿಯೂ ಶಂಖನಾದವನ್ನು ಮೊಳಗಿಸುವುದರಲ್ಲಿ ನಿಷ್ಣಾತರಾಗಿದ್ದರು.

ತಮ್ಮ ತೀರ್ಥರೂಪರ ಸವಿನೆನಪಿಗೆ ಮಿತ್ತೂರು ಪುರೋಹಿತ ಕೃಷ್ಣ ಭಟ್ಟ ಸ್ಮಾರಕ ಗ್ರಂಥಮಾಲೆ ಎಂಬ ಪ್ರಕಾಶನದಡಿಯಲ್ಲಿ ಕನ್ನಡ ಸಂಧ್ಯಾಭಾಷ್ಯ, ಅನುಷ್ಠಾನದೀಪಿಕೆ ಭಾಗ-1, ಅನುಷ್ಠಾನದೀಪಿಕೆ ಭಾಗ-2, ವಿಷ್ಣುಪ್ರೋಕ್ತ ಶಿವಸಹಸ್ರನಾಮ, ಕಡೇಶಿವಾಲಯ ಮಹಾತ್ಯೆ, ಸುಲಭ ಸಂಸ್ಕೃತ ಬೋಧಕ, ಸತ್ಯದತ್ತವ್ರತಕಥಾ ಇತ್ಯಾದಿ ಅನೇಕ ಗ್ರಂಥಗಳನ್ನು ಪ್ರಕಾಶಕ್ಕೆ ತಂದರು. ಸಂದ್ಯೋಪಾಸನೆ ಬಗ್ಗೆ ಬಹಳಷ್ಟು ಸವಿವರವಾದ ವಿಚಾರಗಳನ್ನು ತಿಳಿಸುವ ಕನ್ನಡ ಸಂಧ್ಯಾಭಾಷ್ಯ (ಯಾಜುಷ) ಗ್ರಂಥರತ್ನವು ಶ್ರೀ ಶ್ರೀ ಶ್ರೀಮದ್ರಾಘವೇಂದ್ರ ಭಾರತೀ ಶ್ರೀಸ್ವಾಮಿಗಳವರಿಂದ ಬಹಳವಾಗಿ ಪ್ರಶಂಸಿಸಲ್ಪಟ್ಟಿತ್ತಲ್ಲದೆ ಕರ್ನಾಟಕದ ಅನೇಕಾನೇಕ ವಿದ್ವಾಂಸರ ಮೆಚ್ಚುಗೆಯನ್ನೂ ಗಳಿಸಿತ್ತು. ಪ್ರಕಾಶನಪೂರ್ವವೇ ನಾಳೆಗೆ ಸಿಗಲಾರದ ಪುಸ್ತಕವೆಂದು ಪ್ರಚಾರಗೊಂಡ ಈ ಗ್ರಂಥ ದ್ವಿತೀಯ ಮುದ್ರಣಗೊಂಡು ಅಲ್ಪಸಮಯದಲ್ಲೇ ಎಲ್ಲಾ ಪ್ರತಿಗಳು ಮಾರಾಟವಾಗಿ ಹೋಗಿರುವುದು ಗ್ರಂಥದ ಶ್ರೇಷ್ಠತೆಯನ್ನು ತಿಳಿಸುತ್ತದೆ.

ಅಧ್ಯಯನದಂತೆ ಅಧ್ಯಾಪನಕ್ಕೂ ಪ್ರಾಧಾನ್ಯ ಕೊಡುತ್ತಿದ್ದ ಶ್ರೀಯುತ ಶಂಕರನಾರಾಯಣ ಭಟ್ಟರ ಶಿಷ್ಯ-ಶಿಷ್ಠೆಯರು ಅನೇಕ ಮಂದಿ, ಬಹಳಷ್ಟು ಮಂದಿ ಸಂಸ್ಕೃತ ಅಧ್ಯಯನ ಹಾಗೂ ಪೂರ್ವ-ಅಪರ ಪ್ರಯೋಗಪಾಠ ಕಲಿತು ಸಾಕಷ್ಟು ಹೆಸರು ಗಳಿಸಿದವರಿದ್ದಾರೆ. ಪುರೋಹಿತನಾದವನು ತಾನು ಮಾಡುವ ವೈದಿಕ ಕ್ರಿಯಾಭಾಗಾದಿಗಳ ಅರ್ಥವನ್ನು ತಿಳಿದುಕೊಳ್ಳುವಷ್ಟಾದರೂ ಸಂಸ್ಕೃತಾಧ್ಯಯನವನ್ನು ಮಾಡಬೇಕು. ಸ್ಪಷ್ಟ ಹಾಗೂ ಸಸ್ವರಯುಕ್ತ ಮಂತ್ರೋಚ್ಚಾರಣೆ ವೈದಿಕರಲ್ಲಿರಬೇಕಾದುದು ಬಹಳ ಮುಖ್ಯ ಧನದ ಆಶೆಯನ್ನು ಮುಂದಿಟ್ಟುಕೊಂಡು ಪೌರೋಹಿತ್ಯ ನಡೆಸಬಾರದು. ಹಣದ ಹಿಂದೆ ನಾವು ಹೋಗಬಾರದು. ಹಣವು ನಮ್ಮ ಹಿಂದೆ ಬರುವಂತಿರಬೇಕು. ಬುದ್ದಿಯನ್ನು ಸಿಟ್ಟಿನ ಕೈಯಲ್ಲಿ ಕೊಡಬಾರದು. ಮಾತಿನಂತೆ ಆಚರಣೆ ಹಾಗೂ ಸಮಯಪರಿಪಾಲನೆ ಅತಿಮುಖ್ಯ- ಇತ್ಯಾದಿಗಳು ಅವರು ಆಗಾಗ ನುಡಿಯುತ್ತಿದ್ದ ಹಿತವಚನಗಳು. ಅವರು ಈ ಮಾತುಗಳಿಗನುಗುಣವಾಗಿ ನಡೆದುಕೊಂಡವರು. ಮಂಗಳೂರಿನ ಕಲಾದರ್ಶನ, ಪುತ್ತೂರಿನ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಅನೇಕ ಅಭಿಮಾನಿಗಳಿಂದ. ಬಂಧುವರ್ಗದವರಿಂದ ಬೇರೆ ಬೇರೆ ಸಂದರ್ಭಗಳಲ್ಲಿ ಸನ್ಮಾನಿತರಾದ ಶ್ರೀಯುತರನ್ನು ವೈದಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವೈದ್ಯನೆಂದೂ ಹಲವರು ಗೌರವಿಸಿದ್ದಿದೆ. ಭಾಗವತ, ದೇವೀಭಾಗವತ, ರಾಮಾಯಣವೇ ಮೊದಲಾದ ಗ್ರಂಥಗಳ ಪ್ರವಚನವನ್ನು ಮಾಡುತ್ತಿದ್ದ ಇವರು ಬಹಳ ಕಡೆ ಭಾಗವತ ಸಪ್ತಾಹದ ನೇತೃತ್ವವನ್ನು ವಹಿಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲ ಪ್ರತಿ ಸೋಮವಾರ ಪ್ರವಚನ ನಡೆಸಿದ್ದರು.

ಸದಾ ಶ್ವೇತವಸ್ತ್ರಧಾರಿಯಾಗಿದ್ದ ಅವರ ಮನಸ್ಸು ಅಷ್ಟೇ ನಿರ್ಮಲ-ನಿಷ್ಕಲ್ಮಷ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಂಸಾರ ಅವರದು. ಮಧ್ಯವಯಸ್ಸಿನಲ್ಲಿ ಪತ್ನಿವಿಯೋಗವಾಯಿತು. ಸಂಸಾರಸಾಗರದ ಭೋರ್ಗರೆವ ತೆರೆಗಳ ಹೊಡೆತವು ಅವರ ತನು-ಮನಗಳನ್ನು ಸಾಕಷ್ಟು ಘಾಸಿಗೊಳಿಸಿದ್ದರೂ ಬಾಹ್ಯಜಗತ್ತಿಗೆ ಅದನ್ನೆಂದೂ ತೋರ್ಪಡಿಸದೆ ಸದಾ ಪ್ರಸನ್ನತೆಯ ಮುಖಭಾವ ಹೊಂದಿದವರಾಗಿದ್ದರು. ಸಮಾಜ ಹಾಗೂ ವೈದಿಕಕ್ಷೇತ್ರಗಳು ಅವರ ಅಪಾರವಾದ ಅನುಭವ, ಮಾರ್ಗದರ್ಶನ, ವೈದಿಕ ಸಾಹಿತ್ಯಗ್ರಂಥಗಳ ಕೊಡುಗೆಗಳನ್ನು ನಿರೀಕ್ಷಿಸುತ್ತಿತ್ತು. ಅವರ ಹಿರಿಯರೆಲ್ಲರಿಂದ ತಮ್ಮನೆಂಬ ಅಭಿಧಾನವನ್ನು ಪಡೆದರೂ ಅಧ್ಯಯನ, ಅಧ್ಯಾಪನ, ವಾಗಿತೆ, ಗ್ರಂಥರಚನೆಗಳಿಂದ ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟರಾಗಿ ಬೆಳೆದು ಬಂಧುವರ್ಗದವರಿಗೆ ತಮ್ಮ ಭಾವ-ತಮ್ಮ ಮಾವ-ತಮ್ಮಪ್ಪಚ್ಚಿಯಾಗಿ ಸಮವಯಸ್ಕರಿಗೆ ತಮ್ಮ ಭಟ್ಟನಾಗಿ- ಅಂತೂ ಎಲ್ಲರಿಂದಲೂ, ಎಲ್ಲ ರೀತಿಯಿಂದಲೂ ತಮ್ಮವನೆಂದೇ ಗುರುತಿಸಿಕೊಂಡು ದಿನಾಂಕ 27-2-1995ರಂದು ತಮ್ಮ ಪೂರ್ಣ 77 ವರ್ಷಗಳ ಸಾರ್ಥಕವಾದ ಬದುಕನ್ನು ಮುಗಿಸಿ ಪರಲೋಕವಾಸಿಯಾದರು.

ಅವರ ನಿರ್ಗಮನ ಸಮಾಜಕ್ಕೆ, ಬಂಧುವರ್ಗಕ್ಕೆ, ಆತ್ಮೀಯರಿಗೆ ತುಂಬಲಾರದ ನಷ್ಟವಾದರೂ ಅವರು ಸಮಾಜಕ್ಕೆ ನೀಡಿದ ಅಮೂಲ್ಯ ಗ್ರಂಥಗಳು, ಅದರಲ್ಲಿ ಪ್ರತಿಪಾದಿಸಿರುವ ವಿಚಾರಗಳು, ಅವರ ಪ್ರಬುದ್ಧ ಲೇಖನಗಳು, ಆದರ್ಶಗಳು ಅವರ ಹೆಸರನ್ನು ಸದಾ ಜೀವಂತವಾಗಿರಿಸಿವೆ. ತಮ್ಮ ಅಣ್ಣನ ಬಗೆಗೆ ಅವರಿಗೆ ವಿಶೇಷವಾದ ಗೌರವವಿತ್ತು, ಸಂಪ್ರತಿಷ್ಠಾನದ ಸ್ಥಾಪನೆ ಮತ್ತು ಅದರ ಆರಂಭಿಕ ಕಾಲದ ಅಭಿವೃದ್ಧಿಮಾರ್ಗದಲ್ಲಿ ಅವರು ಪಾಲುಗೊಂಡು ಸಕ್ರಿಯವಾಗಿ ಮಾರ್ಗದರ್ಶನ ಮಾಡುತ್ತಿದ್ದುದನ್ನು ಕೃತಜ್ಞತಾಪೂರ್ವಕವಾಗಿ ನೆನೆಯಲೇಬೇಕಾಗಿದೆ. ಪುರೋಹಿತ ಶಂಕರನಾರಾಯಣ ಭಟ್ಟ ಮತ್ತು ಮೈಕೆ ಶಂಕರನಾರಾಯಣ ಭಟ್ಟ-ಇವರಿಬ್ಬರ ಶತಮಾನಸಂದರ್ಭದಲ್ಲಿ ಸಂಪ್ರತಿಷ್ಠಾನವು 'ಪುರೋಹಿತಸ್ಥರಣ' (ಸಂ. ಡಾ. ಪಾದೇಕಲ್ಲು ವಿಷ್ಣುಭಟ್ಟ ಮತ್ತು ಮಿತ್ತೂರು ಪುರೋಹಿತ ತಿರುಮಲೇಶ್ವರ ಭಟ್ಟ) ಎಂಬ ಪುಸ್ತಕವನ್ನು ಪ್ರಕಟಿಸಿರುತ್ತದೆ. (2018) *